ಪೆರೂಟ್ಸ್, ಮ್ಯಾಕ್ಸ್ ಫರ್ಡಿನೆಂಡ್ 
1914. ಆಸ್ಟ್ರಿಯನ್-ಬ್ರಿಟಿಷ್ ಜೀವರಸಾಯನ ವಿಜ್ಞಾನಿ.  ವಿಯನ್ನಾದಲ್ಲಿ ಜನನ (19-5-1914).  1932 ರಲ್ಲಿ ವಿಯನ್ನಾ ವಿಶ್ವವಿದ್ಯಾಲಯ ಸೇರಿ ಅಕಾರ್ಬನಿಕ ರಸಾಯನಶಾಸ್ತ್ರದ ವಿಶ್ಲೇಷಣ ಪದ್ಧತಿಯ ಅಧ್ಯಯನ ಮಾಡುತ್ತಿದ್ದಂತೆ ಈತನ ಕುತೂಹಲ ಕಾರ್ಬನಿಕ ರಸಾಯನ ಶಾಸ್ತ್ರದತ್ತ ವಾಲಿತು.  ಅದರಲ್ಲೂ ಫಾನ್‍ವೆಸ್ಲಿ ಎಂಬಾತನ ಜೀವರಸಾಯನಶಾಸ್ತ್ರದ ಪಾಠಗಳು ಈತನಿಗೆ ಅತಿ ಪ್ರಿಯವಾದುವು.  ಆ ಪಾಠಗಳಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಎಫ್.ಜಿ.ಹಾಫ್‍ಕಿನ್ಸ್ ಎಂಬಾತನ ಪ್ರಯೋಗಗಳನ್ನು ವಿವರಿಸುತ್ತಿದ್ದುದರಿಂದ ಸಹಜವಾಗಿ ಪೆರೂಟ್ಸ್ ತನ್ನ ಸಂಶೋಧನ ಮಹಾಪ್ರಬಂಧ ಸಿದ್ಧಪಡಿಸಲು ಕೇಂಬ್ರಿಜ್ಜೇ ಸರಿಯಾದ ಸ್ಥಳವೆಂದು ನಿರ್ಧರಿಸಿ, ಕ್ಯಾವೆಂಡಿಷ್ ಪ್ರಯೋಗ ಶಾಲೆಯಲ್ಲಿ ಜೆ.ಡಿ.ಬರ್ನಾಲ್ ಬಳಿ ಸಂಶೋಧನೆಗೆ ಸೇರಿದ (1936).

ಹಿಟ್ಲರ್ ಕೈಗೊಂಡ ಆಸ್ಟ್ರಿಯ ಮತ್ತು ಚೆಕೊಸ್ಲೊವಾಕಿಯ ದಂಡಯಾತ್ರೆಯ ಫಲವಾಗಿ ಪೆರೂಟ್ಸನ ತಂದೆಯ ವಂಶಪಾರಂಪರ್ಯ ಬಟ್ಟೆವ್ಯಾಪಾರ ಕುಸಿದು ಆತ ನಿರಾಶ್ರಿತನಾದ.  ಹೀಗಾಗಿ ಪೆರೂಟ್ಸ್, ಸರ್ ಲಾರೆನ್ಸ್ ಬ್ರಾಗನ ಪ್ರಯೋಗ ಸಹಾಯಕನಾಗಿ ಸೇರಿ (1939) ಹಣ ಸಂಪಾದನೆ ಮಾಡಬೇಕಾಯಿತು.  ರಾಕ್‍ಫೆಲ್ಲರ್ ದತ್ತಿಯ ಧನಸಹಾಯವೂ ಒದಗಿಬಂತು.  ಹೊಸತಾಗಿ ವ್ಯವಸ್ಥೆ ಮಾಡಿದ ವೈದ್ಯಕೀಯ ಸಂಶೋಧನ ಮಂಡಲದ ಅಣುಜೀವಶಾಸ್ತ್ರ ಘಟಕದ ಮುಖ್ಯಸ್ಥನಾಗಿ ನೇಮಿಸಲಾಯಿತು (1947).  ಅಲ್ಲಿ ಈತನ ಏಕಮಾತ್ರ ಸಂಗಾತಿ ಆಗಿದ್ದವ ಮುಂದೊಂದು ದಿನ ಈತನ ಜೊತೆಯಲ್ಲೇ ನೊಬೆಲ್ ಪಾರಿತೋಷಿಕ ಪಡೆದ ಪ್ರಖ್ಯಾತ ಅಣುಜೀವ ವಿಜ್ಞಾನಿ ಜೆ.ಸಿ. ಕೆಂಡ್ರೂ. ಮುಂದೆ 1942ರಲ್ಲಿ ಪೆರೂಟ್ಸ್ ಈ ಘಟಕದ ಅಧ್ಯಕ್ಷನಾಗುವ ತನಕವೂ ಸರ್ ಲಾರೆನ್ಸ್ ಬ್ರಾಗ್‍ನೊಡನೆ ಸಹಯೋಗ ಮುಂದುವರಿದಿತ್ತು.

ರಕ್ತದಲ್ಲಿರುವ ಹಿಮೊಗ್ಲಾಬಿನ್ ಎಂಬ ಅತ್ಯಂತ ಪ್ರಮುಖಾಂಶದ ರಚನೆಯ ಬಗೆಗೆ ಪೆರೂಟ್ಸನ ಸಂಶೋಧನೆ ಪ್ರಾರಂಭವಾಯಿತು.  ಈ ಕಾರ್ಯಕ್ಕೆ ಮೂವರು ಪ್ರಾಧ್ಯಾಪಕರಿಂದ ಸ್ಫೂರ್ತಿಯೊದಗಿತ್ತು.  ನೊಬೆಲ್ ಪ್ರಶಸ್ತಿ ವಿಜೇತ ಎಫ್.ಜಿ. ಹಾಪ್‍ಕಿನ್ಸ್ ಅಂಗಾಂಶಗಳಲ್ಲಿಯ ರಾಸಾಯನಿಕ ಕ್ರಿಯಾ ವೇಗ ವರ್ಧಕಗಳಾದ ಕಿಣ್ವಗಳ ಪಾತ್ರದ ಕಡೆಗೆ ಆಗಿನ ಸಂಶೋಧಕರ ಗಮನವನ್ನು ಸೆಳೆದಿದ್ದ.  ಅಂದು ತಿಳಿದಿದ್ದ ಕೆಲವು ಕಿಣ್ವಗಳೆಲ್ಲವೂ ಪ್ರೋಟೀನುಗಳೇ.  ಕಬ್ಬಿಣ ಪ್ರೋಟೀನಿನೊಡನೆ ಸಂಯೋಗವಾದಾಗ ಉಂಟಾಗುವ ರಾಸಾಯನಿಕ ಆಕರ್ಷಣೆ, ಮತ್ತು ವೇಗವರ್ಧನೆಯಲ್ಲಿ ಆಗುವ ವ್ಯತ್ಯಾಸ ಇವನ್ನು ಡೇವಿಡ್ ಕೀಲಿನ್ ಪತ್ತೆ ಮಾಡಿದ್ದ. ಉಚ್ಛ್ವಾಸ ನಿಶ್ವಾಸ ಕ್ರಿಯಾ ವೇಗವರ್ಧಕ ಕಿಣ್ವಗಳನ್ನು ಆವಿಷ್ಕರಿಸಿದವನು ಇವನೇ.  ಪೆರೂಟ್ಸನ ಗುರು ಜೆ. ಡಿ. ಬರ್ನಾಲ್ ಆಗಲೇ ಎಕ್ಸ್‍ಕಿರಣ ವಿವರ್ತನೆಯಿಂದ ಸ್ಫಟಿಕ ವಿನ್ಯಾಸ ಶೋಧನೆಯಲ್ಲಿ ತೊಡಗಿದ್ದ.  ಪ್ರೋಟೀನುಗಳು ಹೆಚ್ಚು ದೊಡ್ಡ ಅಣುಗಳಾಗಿದ್ದರೂ ಅವುಗಳಿಗೆ ನಿರ್ದಿಷ್ಟ ರಚನೆ ಇದೆ ಎಂಬ ಸಂಗತಿಯನ್ನು ಹಾಪ್‍ಕಿನ್ಸ್ ಮತ್ತು ಬರ್ನಾಲ್ ತೋರಿಸಿದ್ದರು.  ಆ ಕಾಲದಲ್ಲಿ ಇದೊಂದು ಆಶ್ಚರ್ಯಕರ ಶೋಧವಾಗಿತ್ತು.  ಅಂದು ನ್ಯೂಕ್ಲಿಯರ್ ಆಮ್ಲಗಳ ಪ್ರಾಮುಖ್ಯ ತಿಳಿದಿರಲಿಲ್ಲ. ಹೀಗಾಗಿ ಜೀವಿಗಳ ರಹಸ್ಯ ಪ್ರೋಟೀನುಗಳಲ್ಲಿ ಅಡಕವಾಗಿರಬಹುದೆಂದು ಭಾವಿಸಲಾಗಿತ್ತು.  ಪ್ರೋಟೀನುಗಳ ರಚನೆ ಎಕ್ಸ್‍ಕಿರಣ ವಿವರ್ತನೆಯ ವಿಧಾನದಿಂದ ಮಾತ್ರ ತಿಳಿಯಬಹುದೆಂಬುದೂ ಗೊತ್ತಾಗಿತ್ತು.  ಆಗ ತಿಳಿದಿದ್ದ ಸುಮಾರು ಹನ್ನೆರಡು ಪ್ರೋಟೀನುಗಳ ಪೈಕಿ ಹಿಮೊಗ್ಲಾಬಿನ್ ಸುಲಭವಾಗಿ ದೊರೆಯಬಲ್ಲುದೂ ಸುಲಭವಾಗಿ ಸ್ಫಟೀಕರಿಸಬಲ್ಲುದೂ ಆಗಿತ್ತು.  ಅಲ್ಲದೆ ಎಲ್ಲಕ್ಕೂ ಮಿಗಿಲಾಗಿ ಅದು ಶರೀರಶಾಸ್ತ್ರದಲ್ಲಿ ಅತ್ಯಂತ ಹೆಚ್ಚು ಮಹತ್ತ್ವವುಳ್ಳದ್ದೂ ಆಗಿತ್ತು.  ಹೀಗಾಗಿ ಅದನ್ನೇ ರಚನಾ ವಿಶ್ಲೇಷಣೆಗೆ ಆಯಲಾಯಿತು.  ಆದರೆ ಆ ಕಾಲದಲ್ಲಿ ಎಕ್ಸ್ ಕಿರಣ ವಿಧಾನದಿಂದ ಶೋಧಿಸಿದ್ದ ಅತ್ಯಂತ ದೊಡ್ಡ ಅಣು ವಿನ್ಯಾಸ ಎಂದರೆ 58 ಪರಮಾಣುಗಳುಳ್ಳ ತ್ಯಾಲೊಸೈನಿನ್ ಎಂಬ ರಂಗುಗಾರಕ ವಸ್ತುವಿನದು.  ಹೀಗಾಗಿ ಸಹಸ್ರಾರು ಪರಮಾಣುಗಳುಳ್ಳ ಹಿಮೊಗ್ಲಾಬಿನ್ ಸ್ಫಟಿಕ ವಿಶ್ಲೇಷಣೆ ಅತ್ಯಂತ ಜಟಿಲವಾಗಿ ಅಂದು ಕಂಡಿದ್ದರೆ ಆಶ್ಚರ್ಯವೇನಿಲ್ಲ. 
ಅಣು ರಚನಾ ವಿಶ್ಲೇಷಣೆಯನ್ನು ಪೆರೂಟ್ಸ್ ಪ್ರಾರಂಭಿಸಿದಾಗ ಆತನಿಗೆ ಈ ಕಾರ್ಯಕ್ಕೆ ಇದ್ದ ಮಿತಿಗಳಿಂದ ಎಕ್ಸ್‍ಕಿರಣ ವಿವರ್ತನ ಚಿತ್ರಗಳನ್ನು ಅರ್ಥವಿಸುವುದು ಅತಿ ನಿಧಾನವಾಯಿತು. ಆದರೆ, 1950ರಿಂದ ಮುಂದೆ ಹಿಮೊಗ್ಲಾಬಿನ್ ಅಣುವಿನೊಳಕ್ಕೆ ಪಾದರಸದಂಥ ಭಾರ ಪರಮಾಣುಗಳನ್ನು ಜೋಡಿಸಿದಾಗ ಬಂದ ವಿವರ್ತನ ಚಿತ್ರಗಳು ಈ ಕೆಲಸವನ್ನು ತ್ವರೆಗೊಳಿಸಿದುವು.  ಇದೇ ಕಾಲಕ್ಕೆ ಜಾನ್ ಸಿ. ಕೆಂಡ್ರೂ, ಅದೇ ಪ್ರಯೋಗಶಾಲೆಯಲ್ಲಿ ಆಕ್ಸಿಜನ್ನಿನ ಸಾಗಣಿ ಕಾರ್ಯ ಮಾಡುವ ಮಯೊಗ್ಲಾಬಿನ್ ಎಂಬ ಪ್ರೋಟೀನಿನ ಮೂರು ಆಯಾಮಗಳ ರಚನೆಯನ್ನು ಶೋಧಿಸಲು ತೊಡಗಿದ.  ಕಶೇರುಕ ಮತ್ತು ಅಕಶೇರುಕ ಪ್ರಾಣಿಗಳಲ್ಲಿರುವ ಈ ಮಯೊಗ್ಲಾಬಿನ್ ಹಿಮೊಗ್ಲಾಬಿನ್ನಿಗಿಂತ ಸರಳವಾದ ಅಣು.  ಅದು ಹಿಮೊಗ್ಲಾಬಿನ್ನಿನ ನಾಲ್ಕು ಸರಗಳಲ್ಲಿ ಒಂದರಷ್ಟು ಮಾತ್ರ ಉದ್ದವಾಗಿರುತ್ತದೆ.  ಅದರಲ್ಲಿ ಒಂದೇ ಒಂದು ಕಬ್ಬಿಣದ ಪರಮಾಣು ಮಾತ್ರ ಇರುವುದು.  ಈ ರಚನಾ ವಿಶ್ಲೇಷಣೆಯಲ್ಲಿ ಕೆಂಡ್ರೂ ಎಕ್ಸ್‍ಕಿರಣ ವಿವರ್ತನ ಚಿತ್ರಗಳನ್ನು ಅರ್ಥವಿಸಲು ಆಗ ತಾನೇ ಒದಗುತ್ತಿದ್ದ ವಿಶೇಷ ವೇಗದ ಗಣಕಗಳನ್ನು ಉಪಯೋಗಿಸಿದ.  ಭಾರ ಪರಮಾಣು ಜೋಡಣೆ ಮತ್ತು ಗಣಕದ ಉಪಯೋಗ ಈ ಎರಡು ಕಾರಣಗಳಿಂದ ಮಯೊಗ್ಲಾಬಿನ್ ವಿಶ್ಲೇಷಣೆಗೆ ಹೆಚ್ಚು ಸಹಾಯವಾಗಿ ಅದರ 6 ಪೃಥಕ್ಕರಣೆಯ ಮೂರು ಆಯಾಮಗಳ ರಚನೆಯ ಶೋಧವಾಯಿತು.  ಇಂಥ ರಚನೆಯಲ್ಲಿ ಪಾಲಿ ಪೆಪ್ಟೈಡ್ ಸರ ವಿಚಿತ್ರವಾಗಿ ಮಡಿಚಿಕೊಂಡು ಮೊದಲಬಾರಿ ನೋಡುವವರಿಗೆ ಯಾವ ಅಭಿಪ್ರಾಯವನ್ನು ಉಂಟು ಮಾಡಲೂ ಸಾಧ್ಯವಾಗದೆ ನಿರಾಶೆ ಆಗುತ್ತಿತ್ತು.  ಆದರೆ ಮುಂದಿನ ಎರಡು ವರ್ಷಗಳಲ್ಲಿ ಪೆರೂಟ್ಸ್ ಹಿಮೊಗ್ಲಾಬಿನ್ನಿನ ಮೂರು ಆಯಾಮಗಳ ರಚನೆಯನ್ನು 6 ಗೆ ಪ್ರಥಕ್ಕರಿಸಿದಾಗ ಅಲ್ಲಿ ಕಂಡದ್ದು ಹಿಮೊಗ್ಲಾಬಿನ್ನಿನ ( ಮತ್ತು ( ಪಾಲಿ ಪೆಪ್ಟೈಡ್ ಸರಗಳು ಮಯೊಗ್ಲಾಬಿನ್ ಪಾಲಿ ಪೆಪ್ಟೈಡ್ ಸರದಂತೆಯೇ ಹೊಂದಿದ್ದ ಆಕಾರ.  ಮಯೊಗ್ಲಾಬಿನ್ನಿನ ಸರ ಮತ್ತು ಹಿಮೊಗ್ಲಾಬಿನ್ನಿನ ( ಮತ್ತು ( ಸರಗಳು ಬಹಳ ಹೋಲುತ್ತವೆ.  ವಾಸ್ತವವಾಗಿ ಎಲ್ಲ ಕಶೇರುಕ ಪ್ರಾಣಿಗಳ ಮಯೊ ಮತ್ತು ಹಿಮೊಗ್ಲಾಬಿನ್ನುಗಳು ಈ ಮಾದರಿಯವು.  ಮೊದಲು ಮಯೊಗ್ಲಾಬಿನ್ನಿನಲ್ಲಿ ಗೋಚರವಾಗಿದ್ದ ಈ ಜಟಿಲ ಪಾಲಿಪೆಪ್ಟೈಡ್ ಸರದ ಮಡಿಕೆಯ ರಚನೆ ಆಮ್ಲಜನಕದ ಸಾಗಣೆಗೆ ನಿಸರ್ಗವೇ ವಿನ್ಯಾಸ ಮಾಡಿದ ಮೂಲಭೂತ ರಚನೆ.  ಇಂಥ ವಿನ್ಯಾಸದಲ್ಲಿ ಆಮ್ಲಜನಕವನ್ನು ಸಾಗಣೆ ಮಾಡುವ ಕಾರ್ಯಕ್ಕೆ ಅನುಕೂಲವಾದ ಪರಿಸ್ಥಿತಿಯಲ್ಲಿ ಹಿಮನ್ನು ಇರಿಸಿದೆ.  1960ರ ಸುಮಾರಿಗೆ ಕೆಂಡ್ರೂ ಮಯೊಗ್ಲಾಬಿನ್ನಿನ ಮೂರು ಆಯಾಮಗಳ ರಚನೆಯನ್ನು 2.8  ಗೆ ಪೃಥಕ್ಕರಿಸಿದ.  ಹಾಗೆಯೇ 1968ರ ಸುಮಾರಿಗೆ ಪೆರೂಟ್ಸ್ ಕುದುರೆಯ ಹಿಮೊಗ್ಲಾಬಿನ್ ರಚನೆಯನ್ನು 2.8  ಗೆ ಪೃಥಕ್ಕರಿಸಿದಾಗ ಬಂದ ಎಲೆಕ್ಟ್ರಾನ್ ಸಾಂದ್ರತಾ ಚಿತ್ರಗಳು ಎಲ್ಲ ಅಮೈನೊ ಆಮ್ಲಗಳನ್ನೂ ಪಕ್ಕದ ಸರಗಳನ್ನೂ ಅಲ್ಲದೆ ಕೆಲವು ಹೀಮ್‍ಪುಂಜದ ವಿಶೇಷಗಳನ್ನೂ ತೋರಿಸಿದುವು.  ಮಾನಪ ಹಿಮೊಗ್ಲಾಬಿನ್ ಕೂಡ ಈಗ ಸ್ಥೂಲವಾಗಿ ಪೃಥಕ್ಕರಿಸಲ್ಪಟ್ಟಿದೆ. ಪೆರೂಟ್ಸನ ಹಿಮೊಗ್ಲಾಬಿನ್ ವಿಶ್ಲೇಷಣೆಗೆ 1962 ರ ನೊಬೆಲ್ ಪಾರಿತೋಷಿಕ ದೊರೆಯಿತು.  ಈತನ ಇತರ ಸಂಶೋಧನೆಗಳು ಹಿಮೊಗ್ಲಾಬಿನ್ನಿನ ಅಂಗಾಂಶಗಳ ಬಗೆಗಿನ ವೈಪರೀತ್ಯಗಳು ಮತ್ತು ಕಾಲಾನುಕ್ರಮದ ಮಾರ್ಪಾಡುಗಳನ್ನೊಳಗೊಂಡಿವೆ.  ಆಮ್ಲಜನಕದ ಬಂಧನ ಮತ್ತು ಬಿಡುಗಡೆ ಆಗುವಾಗಿನ ಹಿಮೊಗ್ಲಾಬಿನ್ ಅಣುವಿನ ರಚನಾವಿನ್ಯಾಸದ ವ್ಯತ್ಯಾಸಗಳೂ ಈತನ ಸಂಶೋಧನೆಯಲ್ಲಿ ಸೇರಿವೆ.
(ಜೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ